ಮಹಾಶಿವರಾತ್ರಿಯಲ್ಲಿ ‘ಸಾಂಸ್ಕೃತಿಕ ವೈಭವ’
ಗೋಕರ್ಣ, ಫೆ.೨೬ - ಗೋಕರ್ಣ ಮಂಡಲಾಧೀಶ್ವರ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಅಭೀಷ್ಟೆಯಂತೆ ಒಂಭತ್ತು ದಿನಗಳ ಕಾಲ ಸಂಸ್ಥಾನ ಮಹಾಬಲೇಶ್ವರನ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಮಹೋತ್ಸವ ನಡೆಯಿತು.
ಇದರಲ್ಲಿ ಪೂಜೆ ಪುನಸ್ಕಾರ, ಹೋಮ-ಧೂಮ, ಪ್ರವಚನ ಮೊದಲಾದ ಧಾರ್ಮಿಕ ಆಚರಣೆಗಳಿಗೆ ಸರಿಗಟ್ಟಿ ನಿಲ್ಲುವಂತೆ ಸಾಂಸ್ಕೃತಿಕ ಕಲಾರಾಧನೆಯೂ ನಡೆಯಿತು.
ನಂದಿಕೇಶ್ವರ ವೇದಿಕೆಯಲ್ಲಿ ‘ಸಾಂಸ್ಕೃತಿಕ ವೈಭವ’ ಗೋಕರ್ಣದ ಪಂಚವಾದ್ಯ ನಾದದಿಂದ ಮೊದಲ್ಗೊಂಡಿತು. ನಾಡಿನ ಹೆಸರಾಂತ ಕಲಾವಿದರು ಕಲಾ ಸೇವೆಯನ್ನು ಗೈದರು. ಸಹಸ್ರಾರು ಶ್ರೋತೃಗಳು ರಸಾಸ್ವಾದನೆಯಲ್ಲಿ ಆನಂದ ತುಂದಿಲರಾದರು.
ಫೆ.೧೮ರಿಂದ ಫೆ.೨೬ರವರೆಗೆ ಪ್ರತಿದಿನ ಮದ್ಯಾಹ್ನ ೩ರಿಂದ ಮರುದಿನ ಬೆಳಗ್ಗೆ ೬ರವರೆಗೆ ತಡೆ ರಹಿತವಾಗಿ ಒಂದರ ಹಿಂದೊಂದರಂತೆ ಕಾರ್ಯಕ್ರಮಗಳು ಸಾಂಗವಾಗಿ ಸಾಗಿದವು. ಪ್ರತಿದಿನದ ಒಂದು ಘಂಟೆಯ ಅವಧಿಯಲ್ಲಿ ಸೂಫಿ ಸಂತ ಇಬ್ರಾಹಿಂ ಸುತಾರಾ ಸಂಗಡಿಗರಿಂದ ‘ಅದ್ಯಾತ್ಮಸಂವಾದ ತರಂಗಿಣೀ’ ೮ ದಿನಗಳ ಕಾಲ ನಿರಂತರವಾಗಿ ನಡೆಯಿತು.
ಈ ಕಾರ್ಯಕ್ರಮ ಸರಣಿಯಲ್ಲಿ ಭಿನ್ನ ತಂಡಗಳ ಒಟ್ಟು ೯ ಮಂಗಲವಾದ್ಯ, ೧೫ ಖ್ಯಾತ ಗಾಯಕರಿಂದ ಗಾಯನ, ೭ ಪ್ರಸಿದ್ದ ವೇಣುವಾದಕರಿಂದ ಕೊಳಲು ನಿನಾದ, ೮ ಕಲಾ ತಂಡಗಳಿಂದ ಜಾನಪದ ನೃತ್ಯ, ಇಬ್ಬರು ಹಾಸ್ಯ ಕಲಾವಿದರಿಂದ ಹಾಸ್ಯ ಲಾಸ್ಯ, ಗೋಕರ್ಣದ ಖ್ಯಾತ ವೈದ್ಯೆ ಶೀಲಾ ಹೊಸಮನೆಯವರಿಂದ ಯಕ್ಷ ನೃತ್ಯ, ೮ ನೃತ್ಯ ತಂಡದವರಿಂದ ಶಾಸ್ತ್ರೀಯ ನೃತ್ಯ, ೨ ನೃತ್ಯರೂಪಕ, ಸುಗಮ ಸಂಗೀತ. ಸಿತಾರ್ ವಾದನ, ಭಕ್ತಿಗೀತ ಗಾಯನ, ರಂಗಗೀತೆ, ರುದ್ರವೀಣೆ ಮೊದಲಾದ ಕಲಾಪ್ರಕಾರಗಳು ಸಾಂಸ್ಕೃತಿಕ ವೈಭವದಲ್ಲಿ ವಿಜೃಂಭಿಸಿದುವು. ಖ್ಯಾತ ಯಕ್ಷಗಾನ ಕಲಾವಿದರ ಕೂಡುವಿಕೆಯಿಂದ ಒಟ್ಟು ೧೭ ಯಕ್ಷಗಾನ ಪ್ರಸಂಗಗಳು ರಂಗದ ಮೇಲೆ ಮೂಡಿದುವು.
‘ಸಾಂಸ್ಕೃತಿಕ ವೈಭ’ದ ಸಂಚಾಲಕರಾದ ಕೊಳಲು ವಾದಕ ಕಡತೋಕ ಶಂಭು ಭಟ್ರವರು ಸಮಗ್ರ ಕಾರ್ಯಕ್ರಮ ಜಿಲ್ಲೆಯ ಸೊಗಡನ್ನು ಪ್ರತಿನಿಧಿಸುವಂತೆ ಹೆಣೆದಿದ್ದರು. ಅದರಲ್ಲಿ ಒಂದು ಬಗೆಯ ನಮ್ಮದು ಎಂಬ ಆಪ್ತತೆ ಭಾಸವಾಗುತ್ತಿತ್ತು.
ಲಕ್ಷ್ಮೀನಾರಾಯಣ ಹೆಗಡೆ ಕಲಗಾರು
Report by : Media Center
![]() |

