ಅಸಂಖ್ಯ ಜನರಿಗೆ ಅನುಪಮ ಅಮೃತಾನ್ನ ಸೇವೆ

ಗೋಕರ್ಣ, ಫೆ.೨೫ - ಜಾತ್ರೆಯೆಂದರೆ ಜನಸಂದಣಿ. ಹುರುಪಿನಿಂದ ಜಾತ್ರೆಗೆ ಹೋದಾಗ, ಭರ್ಜರಿ ಜನ ಸೇರಿದ್ದಾರೆಂದು ಹಸಿವು ಬಾಯಾರಿಕೆ ನಿಲ್ಲುವುದಿಲ್ಲ. ಹೊತ್ತುಹೊತ್ತಿಗೆ ತುತ್ತಿನ ಚೀಲ ತುಂಬಿಕೊಳ್ಳಲೇಬೇಕು. ಗೋಕರ್ಣದಲ್ಲಿ ಶಿವರಾತ್ರಿ ಮಹಾಜಾತ್ರೆ. ದೇಶ ವಿದೇಶದ ಯಾತ್ರಾರ್ಥಿಗಳು ಬಂದು ಸೇರುವ ಪರ್ವಕಾಲ. ಆದರೆ ರಾಜ್ಯದ ಬಹುತೇಕ ದೇವಸ್ಥಾನಗಳಲ್ಲಿರುವಂತಹ ಅನ್ನ ಸಂತರ್ಪಣೆ ವ್ಯವಸ್ಥೆ ಇಲ್ಲಿ ಈ ಹಿಂದೆ ಇರಲಿಲ್ಲ. ಕ್ಷೇತ್ರ ಪುರೋಹಿತರ ಮನೆಯಲ್ಲಿ ತಂಗಿ ಜಾತ್ರೆಯಲ್ಲಿ ಭಾಗವಹಿಸಿದವರಿಗೆ ಊಟೋಪಚಾರ ಸಮಸ್ಯೆಯಾಗದಿದ್ದರೂ, ಇನ್ನುಳಿದವರಿಗೆ ಸಮಸ್ಯೆಯಾಗುತ್ತಿತ್ತು. ಪರಸ್ಥಳದವರೆಂದು �'ಂದಕ್ಕೆರಡು ಬೆಲೆ ತೆಗೆದುಕೊಳ್ಳುವ ಉಪಾಹಾರ ಮಂದಿರ, ದರ್ಶಿನಿಗಳಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ ಅನಿವಾರ್ಯತೆ ಇತ್ತು. ತಂದ ಬಹುತೇಕ ಹಣ ಹೊಟ್ಟೆಪಾಡಿಗಾಗಿಯೇ ಖರ್ಚಾಗಿ, ‘ಸೊಕ್ಕಿದ್ದವರಿಗೆ ಯಾಣ, ರೊಕ್ಕ ಇದ್ದವರಿಗೆ ಗೋಕರ್ಣ’ ಎಂಬ ಗಾದೆ ಅನ್ವರ್ಥವಾಗುತ್ತಿತ್ತು.

                  ಆದರೆ ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ದೇವಾಲಯದ ಆಡಳಿತ ಹಸ್ತಾಂತರವಾದ ಮೇಲೆ ಪರಿಸ್ಥಿತಿ ಬದಲಾಗಿದೆ. ಮಠ ಯಾತ್ರಾರ್ಥಿಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಿದೆ. ಜಾತ್ರಾ ಕಾಲದಲ್ಲಿ ಸಮುದ್ರ ತಟದಲ್ಲಿ ವ್ಯವಸ್ಥೆಗೊಳಿಸಿದ ‘ಅಮೃತಾನ್ನ ಭೋಜನ’ ಲಕ್ಷಾಂತರ ಯಾತ್ರಾರ್ಥಿಗಳಿಗೆ ವರದಾನವಾಗಿದೆ. ಶ್ರೀಮಂತ, ಭಿಕ್ಷುಕ, ಮೇಲ್ಜಾತಿ, ಕೆಳಜಾತಿ ಯಾವ ಭೇದವಿಲ್ಲದೇ ನಿರಂತರವಾಗಿ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಯಾತ್ರಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಯಾತ್ರಿಗಳಿಗೆ ಸಾಬಕ್ಕಿಯ ಖಾದ್ಯವನ್ನೂ ತಯಾರಿಸಿ ಬಡಿಸಲಾಗಿದೆ.

ಕೂಜಳ್ಳಿಯ ರಮೇಶ ಇವರ ನೇತೃತ್ವದಲ್ಲಿ ಅಡಿಗೆ ಕಾರ್ಯ ನಡೆಯುತ್ತಿದೆ. ೬೫ ಜನ ಅಡಿಗೆ ಭಟ್ಟರು, ೩೫ ಸಹಾಯಕರು ಅದರ ತಯಾರಿಗೆ ತಮ್ಮ ಕೈ ಹಚ್ಚಿದ್ದಾರೆ. ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆಯ ಸವಿ ಊಟವನ್ನು ೩೦೦ ಶಿವ ಪರಿವಾರದವರು ಉಣಬಡಿಸುತ್ತಿದ್ದಾರೆ. ಸುಮಾರು ೫೦ ಮಹಿಳಾ ಕಾರ್ಯಕರ್ತರು ಊಟದ ತಟ್ಟೆಗಳನ್ನು ಶುಚಿಗೊಳಿಸಿ, ಮುಂದಿನ ವಿತರಣೆಗೆ ಸಹಕರಿಸುತ್ತಿದ್ದಾರೆ. ಎಂಟು ದಿನಗಳ ಅನ್ನ ಸಂತರ್ಪಣೆಗೆ ೧೫ ಕ್ವಿಂಟಾಲ್ ಉಪ್ಪಿನಕಾಯಿ, ೨೦೦ ಕ್ವಿಂಟಾಲ್ ಅಕ್ಕಿ ಪದಾರ್ಥ ತಯಾರಿಗೆ ಬಳಕೆಯಾಗಿದೆ. ಉಪಾಹಾರಕ್ಕೆ ೫೦ ಕ್ವಿಂಟಾಲ್ ರವೆ, ೫೦ ಕ್ವಿಂಟಾಲ್, ೭೦೦೦ ಲೀ. ಹಾಲು, ೧೦,೦೦೦ ಲೀ. ಮೊಸರು ಬಳಕೆಯಾಗಿದೆ ಎಂದು ಅಮೃತಾನ್ನ ವಿಭಾಗದ ಸಂಚಾಲಕ ಪಿ.ಡಿ. ಶ್ರೀಧರ ಪತ್ರಕರ್ತರಿಗೆ ತಿಳಿಸಿದ್ದಾರೆ.

 

 

 

 

 

 

 

 

Report by : ಲಕ್ಷ್ಮೀನಾರಾಯಣ ಹೆಗಡೆ ಕಲಗಾರು

 

Shree Ramachandrapura Math