ಮಹಾಬಲೇಶ್ವರ ದರ್ಶನ, ಗೋ ಪ್ರದರ್ಶಿನಿಯ ಪುಳಕ

ಗೋಕರ್ಣ, ಫೆ.೨೨ - ಗೋಕರ್ಣದ ಮಹಾಬಲೇಶ್ವರ ಸನ್ನಿಧಿಯಲ್ಲಿ ಈಗ ಶಿವರಾತ್ರಿಯ ವೈಭವ. ಮಹಾಶಿವರಾತ್ರಿಯಲ್ಲಿ ಶಿವ ಸಾನ್ನಿಧ್ಯ ಬಯಸಿ ದೇಶ ವಿದೇಶಗಳ ಲಕ್ಷಾಂತರ ಭಕ್ತಾದಿಗಳು ಗೋಕರ್ಣದತ್ತ ಮುಖಮಾಡಿದ್ದಾರೆ. ಯಾತ್ರಿಕರು ‘ಮಹಾಬಲೇಶ್ವರ ದರ್ಶನ’ ಮಾಡಿ ಪುನೀತರಾಗುತ್ತಿರುವುದಷ್ಟೇ ಅಲ್ಲದೇ, ಶ್ರೀರಾಮಚಂದ್ರಾಪುರಮಠ ಆಯೋಜಿಸಿರುವ ‘ಗೋ ಪ್ರದರ್ಶಿನಿ’ಯನ್ನು ನೋಡಿ ಪುಳಕಿತರಾಗುತ್ತಿದ್ದಾರೆ. ದೇಶೀಯ ಗೋತಳಿಗಳಲ್ಲಿ ಅಳಿದುಳಿದ ೩೨ ತಳಿಗಳನ್ನು ಶ್ರೀಮಠ ಸಂರಕ್ಷಿಸಿ, ಸಂವರ್ಧಿಸುತ್ತಿದೆ. ಅವುಗಳಲ್ಲಿ ಅಪರೂಪದ ೮ ತಳಿಗಳು ಗೋ ಪ್ರದರ್ಶಿನಿಯಲ್ಲಿವೆ. ಭಾವುಕ ಭಕ್ತರು ಗೋಗ್ರಾಸ ನೀಡಿ ಕೃತಾರ್ಥರಾಗುತ್ತಿದ್ದಾರೆ. ಆಸಕ್ತರಿಗೆ ದೇಶೀಯ ಗೋತಳಿಗಳ ಬಗೆಗೆ ಜಾಗೃತಿ, ಗೋತಳಿ ಸಂವರ್ಧನೆಯ ಮಾಹಿತಿಯೂ ದೊರೆಯುತ್ತಿದೆ. ಪ್ರದರ್ಶಿನಿಯಲ್ಲಿ ಪಂಚಗವ್ಯ ಚಿಕಿತ್ಸೆ, ಗವ್ಯೋತ್ಪನ್ನ ಪ್ರದರ್ಶನ-ಮಾರಾಟ ನಡೆಯುತ್ತಿದೆ. ಶ್ರೀ ಭಾರತೀ ಗವ್ಯಾಮೃತದ ೩೪ ಗವ್ಯೋತ್ಪನ್ನಗಳಲ್ಲದೇ, ಬೇರೆ ಬೇರೆ ಗೋ ಸಂರಕ್ಷಣಾ ಕೇಂದ್ರದ ಔಷಧಿಗಳೂ ಇಲ್ಲಿ ದೊರೆಯುತ್ತಿವೆ. ಕಾಮದುಘಾ ಯೋಜನೆಯ ಪಂಚಗವ್ಯ ಚಿಕಿತ್ಸೆಯ ತಜ್ಞರು ರೋಗಿಗಳನ್ನು ಪರೀಕ್ಷಿಸಿ ಸಲಹೆ ನೀಡುತ್ತಿದ್ದಾರೆ. ರೋಗಿಗಳಲ್ಲಿ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಮೊದಲಾದ ರೋಗಗ್ರಸ್ತರಿದ್ದಾರೆ. ಚಿಕೂನ್ ಗುನ್ಯಾ ರೋಗಕ್ಕೆ ಪಂಚಗವ್ಯ ಚಿಕಿತ್ಸೆ ಪರಿಣಾಮಕಾರಿಯಾಗಿತ್ತು. ಕುಮಟಾ ತಾಲೂಕಿನಲ್ಲಿ ಇತ್ತೀಚೆಗೆ ತೀವ್ರವಾಗಿ ಕಾಡುತ್ತಿದ್ದು, ಈ ರೋಗಕ್ಕೆ ತುತ್ತಾಗಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಲಕ್ಷ್ಮೀನಾರಾಯಣ ಹೆಗಡೆ ಕಲಗಾರು

 

 

 

 

 

 

 

 

Report by : Media Center

 

Shree Ramachandrapura Math