ನವದಿನದ ಆಧ್ಯಾತ್ಮ ಸಂವಾದ ತರಂಗಿಣಿ ಪ್ರವಚನ ಮಾಲೆಯ ಪ್ರಾರಂಭ
ಗುರುವಿನ ಮಾರ್ಗದರ್ಶನದಿಂದ ಮಾತ್ರ ಬದುಕಿನಲ್ಲಿ ಉನ್ನತಿ : ಇಬ್ರಾಹಿಂ ಸುತಾರಾ
ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೮ - ಬೆನ್ನ ಹಿಂದೆ ಗುರು, ಮುಂದೆ ಗುರಿ ಇದ್ದರೆ ಮಾತ್ರ ಮನುಷ್ಯ ಈ ಬದುಕಿನ ಔನ್ನತ್ಯವನ್ನೂ, ಸಫಲತೆಯನ್ನೂ ಹೊಂದಲು ಸಾಧ್ಯ. ಗುರು ನಮ್ಮ ಜೀವನದ ಎಲ್ಲ ಕತ್ತಲೆಯನ್ನೂ ದೂರ ಮಾಡಿ ಅರಿವಿನ ಬೆಳಕನ್ನು ನೀಡುತ್ತಾನೆ ಆದ್ದರಿಂದಲೇ ಪುರುಂದರದಾಸರಂತಹ ದಾಸ ಶ್ರೇಷ್ಠರೂ ಸಹ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಹೇಳಿದ್ದಾರೆ ಎಂದು ಗುಲ್ಬರ್ಗದ ಶ್ರೀ ಇಬ್ರಾಹಿಂ ಸುತಾರಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಹಾಶಿವರಾತ್ರಿ ಉತ್ಸವದ ಪ್ರಯುಕ್ತ ಏರ್ಪಡಿಸಲಾಗಿರುವ ಒಂಭತ್ತು ದಿನಗಳ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ‘ಅಧ್ಯಾತ್ಮ ಸಂವಾದ ತರಂಗಿಣಿ’ಯಲ್ಲಿ ಭಾರತೀಯ ತತ್ತ್ವಜ್ಞಾನ, ಅದ್ವೈತ, ವೇದಾಂತಗಳ ಹಿರಿಮೆ, ಗರಿಮೆಗಳು ನಿಜಗುಣ ಶಿವಯೋಗಿ ಬಸವಣ್ಣ ಇವರ ವಚನಗಳ ಅನುಭಾವ ಪರಂಪರೆಯ ಬಗ್ಗೆ ಮನಮುಟ್ಟುವಂತೆ ತಮ್ಮ ಸಂಗಡಿಗರ ಜೊತೆ ಸಂವಾದ ನಡೆಸಿ, ಶ್ರೋತೃಗಳ ಮನಗೆದ್ದ ಶ್ರೀ ಸುತಾರಾ ಜೀವದಲ್ಲಿದ್ದುಕೊಂಡೇ ಸಂಸಾರಿಗಳಾಗಿಯೇ ಹೇಗೆ ಭಗವಂತನನ್ನು ಕಾಣಲು ಸಾಧ್ಯ ಎಂಬುದನ್ನು ನಿರೂಪಿಸಿದರು. ಮನುಷ್ಯ ಕೇವಲ ಸಂಸಾರ ಮಾತ್ರಕ್ಕೇ ಸೀಮಿತವಾಗದೇ ಪರತತ್ತ್ವದ ಬಗೆಗೂ ಯೋಚಿಸಿ, ಯೋಜಿಸುವುದೂ ಅಗತ್ಯ ಎಂದರು.
Report by : Media Center
![]() |

