ಮಹಾಶಿವರಾತ್ರಿ ಮಹೋತ್ಸವ ಉದ್ಘಾಟನೆ
ಪರಿವರ್ತನೆಯ ಹರಿಕಾರ - ಶಿವರಾತ್ರಿ - ಪ.ಪೂ. ಶ್ರೀ ಶ್ರೀ ರಾಘವೇಶ್ವರಭಾರತೀ ಶ್ರೀ
ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೮ - ಶಿವರಾತ್ರಿ ಕೇವಲ ರಾತ್ರಿಯಲ್ಲ ಇದು ಮಂಗಳದ ರಾತ್ರಿ. ಎಲ್ಲೆಡೆಗೆ ಹೊಸ ಪರಿವರ್ತನೆಯ ಗಾಳಿಯನ್ನು ಹೊತ್ತು ತರುವ ಹೊಸದಾದ ನವರಾತ್ರಿ. ಪರಮಾತ್ಮ ಶಿವ ಉಳಿದಂತೆ ಗೋಕರ್ಣಕ್ಕೆ ಅದ್ಭುತವಾದ ಕಡಲು, ಶತಶೃಂಗ ಪರ್ವತದ ಚೆಲುವು ಎಲ್ಲವನ್ನೂ ನೀಡಿದ. ಅಷ್ಟೇ ಅಲ್ಲದೇ ತನ್ನನ್ನೇ ತಾನು ಗೋಕರ್ಣಕ್ಕೆ ಕೊಟ್ಟುಕೊಂಡ. ಆದರೆ ಭಗವಂತನ ಈ ಅನಿತರಸಾಧಾರವಣವಾದ ಅನುಗ್ರಹವನ್ನು ಗುರುತಿಸದ ನಾವು ಮನುಷ್ಯರು ಮೂರ್ಖರಾಗಿದ್ದೇವೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಇಂದು ಮಹಾಬಲೇಶ್ವರ ದೇವಾಲಯದ ಒಂಬತ್ತು ದಿನಗಳ ಶಿವರಾತ್ರಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನವನ್ನು ನೀಡುತ್ತಿದ್ದು, ಶ್ರೀಗಳು ಜಡ ವಸ್ತುಗಳಿಗೆ ಚೈತನ್ಯ ನೀಡುವವನು ಪರಮಾತ್ಮ ಆ ಪರಶಿವನೇ ಇಲ್ಲಿ ತನ್ನ ಪ್ರಾಣ ಲಿಂಗವನ್ನು ಪ್ರತಿಷ್ಠಾಪಿಸಿದ್ದಾನೆ. ಇಲ್ಲಿರುವ ಕಡಲಿನ ತೆರೆಗಳಂತೆ ಪರಶಿವನ ಅನುಗ್ರಹವು ಸದಾ ಭಕ್ತರ ಮೇಲೆ ಹರಿಯುತ್ತಿರುತ್ತದೆ. ಈ ಜಗತ್ತಿನಲ್ಲಿ ಯಾವುದೋ ಒಂದು ಚಿಕ್ಕ ತುಂಡನ್ನು, ಅಲ್ಪವಾದ ಕಾಲದಲ್ಲಿ ತನ್ನದು ಎಂದುಕೊಂಡು ಹಾರಾಡಿದವರು ಯಾರೂ ಉಳಿದಿಲ್ಲ. ಅವರ ಹೆಸರೂ ಇಲ್ಲ. ನಮ್ಮೆಲ್ಲರ ಬದುಕಿಗೆ ನಿಜವಾದ ಪ್ರಭು, ಜಗದೊಡೆಯನಾದ ಸಾರ್ವಭೌಮ ಇಂದು ಈ ಸಾರ್ವಭೌಮನ ಅನುಗ್ರಹ ರೂಪವಾಗಿಯೇ ಈ ಪ್ರದೇಶದ ಮಣ್ಣಿನ ಮಗನಾದ ನ್ಯಾ. ನಾಡೋಜ ಶ್ರೀ ಎಸ್.ಆರ್. ನಾಯಕ್ರನ್ನು ‘ಸಾರ್ವಭೌಮ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದೂ ನುಡಿದ ಶ್ರೀಗಳವರು ಗೋಕರ್ಣದಲ್ಲಿ ಪರಿವರ್ತನೆಯ ಗಾಳಿ ಬೀಸಲಾರಂಭಿಸಿದೆ. ಹೊಸ ಶಕೆಯ ಉದಯವಾಗಿದೆ. ಈ ಅವಕಾಶವನ್ನು, ಸಾರ್ವಭೌಮನ ಸೇವೆಯನ್ನು ತಪ್ಪಿಸಿಕೊಂಡವನು ನಿಜವಾದ ಅರ್ಥದಲ್ಲಿ ಬಡವನಾಗುತ್ತಾನೆ ಎಂದರು. ಗೋಕರ್ಣದೆ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆಯಾಗಬೇಕು. ಎಲ್ಲ ರೀತಿಯ ಮಾಲಿನ್ಯ , ಕೊಳಕು ಈ ಕ್ಷೇತ್ರದಿಂದ ದೂರಾಗಬೇಕು ಎಂದರು.
ಸನ್ಮಾನಿತರಾದ ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ. ಎಸ್.ಆರ್. ನಾಯಕ್ ಅವರು ಮಾತನಾಡಿ ನಾನು ನನ್ನ ಬದುಕಿನಲ್ಲಿ ಸಂಪೂರ್ಣವಾಗಿ ಗುರುವಿನ ಅನುಗ್ರಹವನ್ನು ನಂಬಿದವನು. ನನಗೆ ವಿದ್ಯಾಭ್ಯಾಸ ನೀಡಿದವರು ಗುರು ನರೇಂದ್ರ ಮಹಾರಾಜರು. ನನ್ನೂರಾದ ಗೋಕರ್ಣವು ಉಳಿದೆಲ್ಲ ಕ್ಷೇತ್ರಗಳಿಗಿಂತ ಮಿಗಿಲಾಗಿದ್ದರೂ ಪ್ರಸಿದ್ಧಿಯ ಕೊರತೆಯಿಂದ, ದೇವಾಲಯದಲ್ಲಿ ಸಮರ್ಥ ಆಡಳಿತದ ಅಭಾವದಿಂದ ಬಳಲುತ್ತಿತ್ತು. ಇದೀಗ ಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಶ್ರೀಗಳವರ ಸ್ಪರ್ಶಮಾತ್ರದಿಂದಲೇ ಕಳೆದ ಆರು ತಿಂಗಳಲ್ಲಿ ನಂಬಲಸಾಧ್ಯವಾದ ಬದಲಾವಣೆಗಳಾಗಿವೆ. ಕೆಲವೇ ವರ್ಷಗಳಲ್ಲಿ ಈ ಕ್ಷೇತ್ರ ಜಾಗತಿಕ ಸ್ತರದಲ್ಲಿ ತನ್ನ ಗೌರವ ಪತಾಕೆಯನ್ನು ಹಾರಿಸುತ್ತದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹೇಳಿದರು.
ಗುಲ್ಬರ್ಗದ ಕೋರಿಸಿದ್ದೇಶ್ವರ ಮಠದ ಶ್ರೀ ಶ್ರೀ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಅನುಗ್ರಹ ಭಾಷಣ ನೀಡಿ ಭೂಮಿಗೆ ಗುರುತ್ವಾಕರ್ಷಣೆ ಶಕ್ತಿಯಿದ್ದಂತೆಯೇ ಗುರುವಿನಲ್ಲಿ ಶಿಷ್ಯರನ್ನು ಮೇಲೆತ್ತುವ ಅಪೂರ್ವ ಸಾಮರ್ಥ್ಯವಿರುತ್ತದೆ. ದಕ್ಷಿಣದ ಕಾಶಿಯಾದ ಗೋಕರ್ಣಕ್ಕೆ ಪೂಜ್ಯ ಶ್ರೀ ರಾಘವೇಶ್ವರ ಶ್ರೀಗಳಿಂದಾಗಿ ಹೊಸ ಬೆಳಕು ಬಂದಿದೆ. ದೂರದ ಹೊಸನಗರದಲ್ಲಿದ್ದ ಶ್ರೀಗಳವರನ್ನು ಆತ್ಮಲಿಂಗದ ಸಂಕಲ್ಪ ಇಲ್ಲಿಗೆ ಬರುವಂತೆ ಮಾಡಿ, ಗೋಕರ್ಣದ ಉದ್ಧಾರಕ್ಕೆ ತೊಡಗಿಸಿದೆ. ತೋಟದ ಹೂವು, ಹಣ್ಣಗಳನ್ನು ಕಾಯಲು ಬೇಲಿ ಹಾಕಬಹುದು. ಆದರೆ ಹೂವಿನ ಗಂಧಕ್ಕೆ ಬೇಲಿ ಹಾಕಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿ ಕ್ಷೇತ್ರ ಪುನರುತ್ಥಾನ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.
ಸಮಾರಂಭದ ಅತಿಥಿ ಸ್ಥಾನದಿಂದ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಪೂಜ್ಯ ಶ್ರೀಗಳದ್ದು ಪರಿಶುದ್ಧವಾದ ಮುಗ್ಧ ಅಂತಃಕರಣ. ಸಮಾಜದ ಅತ್ಯಂತ ಕೊಟ್ಟಕೊನೆಯ ವ್ಯಕ್ತಿಯನ್ನೂ ಸಹ ಅವರು ಯಾವುದೇ ಜಾತಿ-ಮತ-ಪಂಥದ ಭೇದವಿಲ್ಲದೇ ಮಾತನಾಡಿಸಿ, ಅವನ ಕರೆಗೆ ಓಗೊಡುತ್ತಾರೆ. ಪೂಜ್ಯರ ಅನುಗ್ರಹದಿಂದಾಗಿಯೇ ನನಗೆ ಈ ಕ್ಷೇತ್ರದಲ್ಲಿ ಭಗವಂತನ, ಜನತಾಜನಾರ್ದನನ ಸೇವೆ ಮಾಡುವ ಅವಕಾಶ ದೊರೆತಿದೆ ಎಂದರು.
ಹಳಿಯಾಳದ ಶಾಸಕ ಶ್ರೀ ಸುನೀಲ್ ಹೆಗಡೆಯವರು ಅಹಂಕಾರ ಎಂದೂ ಯಾರಿಗೂ ಒಳ್ಳೆಯದನ್ನು ಮಾಡಿಲ್ಲ. ಮನುಷ್ಯರ ಅಹಂಕಾರವನ್ನು ಮೆಟ್ಟಲು ಪರಮಾತ್ಮನಿಗೆ ಹೆಚ್ಚುಕಾಲ ಬೇಕಿಲ್ಲ ಎಂಬುದಕ್ಕೆ ಗೋಕರ್ಣದಲ್ಲಿ ರಾವಣನ ಸೊಕ್ಕು ಮುರಿದಿದ್ದೇ ಸಾಕ್ಷಿ, ಗೋಕರ್ಣವೇ ಉದಾಹರಣೆ. ಶಿವರಾತ್ರಿ ಉತ್ಸವವನ್ನು ನವರಾತ್ರಿ ಉತ್ಸವವನ್ನಾಗಿ ಪರಿವರ್ತಿಸುವ ಈ ಶುಭಕರ ಸಂದರ್ಭದಲ್ಲಿ ಇಡೀ ಸಮಾಜವೂ ಶ್ರೀಗಳವರಿಗೆ ತನ್ನೆಲ್ಲ ಸಹಾಯವನ್ನೂ ನೆಪಮಾತ್ರಕ್ಕೆ ನೀಡಬೇಕಿದೆ ಎಂದರು.
ದೀವಗಿಯ ಪೂಜ್ಯ ಶ್ರೀ ಶ್ರೀ ರಾಮಾನಂದ ಅವಧೂತರು ದಿವ್ಯ ಸಾನ್ನಿಧ್ಯವನ್ನು ಅನುಗ್ರಹಿಸಿದರು. ಜಿ.ಕೆ. ಹೆಗಡೆಯವರಿಂದ ಸಭಾಪೂಜೆ, ಉಪಾಧಿವಂತ ಮಂಡಲದ ಕಾರ್ಯದರ್ಶಿ ವೇ. ಬಾಲಕೃಷ್ಣ ಜಂಬೆ ದಂಪತಿಯಿಂದ ಪುಷ್ಪಾರ್ಚನೆ ಸಭಾ ಪುಷ್ಪಾರ್ಚನೆ ನಡೆಯಿತು. ಶ್ರೀ ಡಿ.ವಿ. ಶಿವರಾಮಯ್ಯ ಸಮ್ಮಾನಿತರ ಪರಿಚಯ ನೀಡಿದರು. ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ತಾಮ್ರಪತ್ರವನ್ನು ವಾಚಿಸಿದರು. ವಿ. ಜಗದೀಶ ಶರ್ಮಾ ಸಭಾ ಕೂಪವನ್ನು ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಡಾ. ಶಾರದಾ ಜಯಗೋವಿಂದ್ ಅವರು ಅನುವಾದಿಸಿದ ಇಂಗ್ಲೀಷ್ ಕೃತಿ ‘ಲಿವಿಂಗ್ ವಿತ್ ಗಾಡ್’ ಶ್ರೀಗಳವರ ಸಾನ್ನಿಧ್ಯದಲ್ಲಿ ಡಾ. ಎಸ್.ಆರ್. ನಾಯಕ್ ಅವರು ಲೋಕಾರ್ಪಣೆಗೊಳಿಸಿದರು.
Report by : Media Center
![]() |

