ಹೊಸನಗರ, ಮಾ.೨೪ - ಚೈತ್ರಮಾಸದ ಆರಂಭ ಯುಗಾದಿಯಿಂದ. ಅದಕ್ಕೆ ಶ್ರೀರಾಮೋತ್ಸವದ್ದು ವಿಶಿಷ್ಟ ಮೆರಗು. ಎಂದಿನಂತೆ ಈ ಬಾರಿಯೂ ಶ್ರೀರಾಮಚಂದ್ರಾಪುರಮಠ ಆ ಮೆರುಗಿನಲ್ಲಿ ಮಿಂದೇಳಲಿದೆ. ಈ ಬಾರಿ ಅದು ’ಹನುಮೋತ್ಸವ’ವಾಗಿ ಪ್ರಸ್ತುತಗೊಳ್ಳಲಿದೆ.
ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನ ಹಾಗೂ ಸನ್ನಿಧಿಯಲ್ಲಿ ಈ ಹನುಮೋತ್ಸವ ನಡೆಯಲಿದೆ. ಈ ಬಾರಿಯದ್ದು ಐದು ದಿನಗಳ ಉತ್ಸವ, ಮಾ.೩೧ ರಿಂದ ಏ.೪ರ ವರೆಗೆ.
ಈ ಸಾಲಿನ ಉತ್ಸವ ಹಲವು ವಿಶೇಷಗಳ ಸಮ್ಮಿಲನ. ಆಂಜನೇಯನ ವಿಶೇಷ ಆರಾಧನೆ, ಶ್ರೀ ಸ್ವಾಮೀಜಿಯವರ ಪೀಠಾರೋಹಣ ದಶಮಾನೋತ್ಸವ, ಗುರುಕುಲದ ವಿದ್ಯಾರ್ಥಿಗಳ ಛಾತ್ರೋತ್ಸವ ಎಲ್ಲವೂ ಒಟ್ಟಾಗಿ ಹನುಮೋತ್ಸವ ವಿಶಿಷ್ಟವಾಗಿ ಕಂಗೊಳಿಸಲಿದೆ. ಅಷ್ಟೇ ಅಲ್ಲದೇ, ಮತ್ತೊಂದು ಹೊಸ ಹೆಜ್ಜೆಯೂ ಇದೆ. ರಥದಲ್ಲಿ ವಿರಾಜಿಸಿದ ದೇವರನ್ನು ಸ್ಪರ್ಶಿಸಿ, ಪೂಜಿಸುವ ಅವಕಾಶವನ್ನು ಎಲ್ಲರಿಗೂ ಕಲ್ಪಿಸಲಾಗಿದೆ.
ದಿನ ನಿತ್ಯದ ಕಾರ್ಯಕ್ರಮ ಇಂತಿದೆ :
ಮಾ.೩೧, ಮಂಗಳವಾರ : ಸಂಜೆ ೫ಕ್ಕೆ ಶ್ರೀ ಸ್ವಾಮೀಜಿಯವರ ಪುರಪ್ರವೇಶ
ಏ.೧, ಬುಧವಾರ : ಶ್ರೀ ಸ್ವಾಮೀಜಿಯವರ ಪೀಠಾರೋಹಣ ದಶಮಾನೋತ್ಸವದ ಪ್ರಾರಂಭ, ಗುರುಕುಲದ ’ಅಮೃತಮಯಿ ಭವನ’ದ ಲೋಕಾರ್ಪಣೆ
ಏ.೨, ಗುರುವಾರ : ಗುರುಕುಲದ ವಿದ್ಯಾರ್ಥಿಗಳ ಛಾತ್ರೋತ್ಸವ, ಶ್ರೀರಾಮದೇವರ ಪಲ್ಲಕ್ಕಿ ಉತ್ಸವ, ಆಂಜನೇಯ ಸ್ವಾಮಿ ರಾಜಬೀದಿ ಉತ್ಸವ, ಪುಷ್ಪ ರಥೋತ್ಸವ
ಏ.೩, ಶುಕ್ರವಾರ : ಶ್ರೀರಾಮಜನ್ಮೋತ್ಸವ, ಶ್ರೀಮನ್ಮಹಾರಥೋತ್ಸವ, ಧರ್ಮಸಭೆ, ಶ್ರೀಮಾತಾ-ಪುರುಷೋತ್ತಮ ಪ್ರಶಸ್ತಿ ಪ್ರದಾನ ; ಸಂಜೆ - ಸೀತಾಕಲ್ಯಾಣೋತ್ಸವ, ಶ್ರೀರಾಮಲೀಲಾ (ರಾವಣ ದಹನ) ; ರಾತ್ರಿ ೧೦:೩೦ ರಿಂದ ಯಕ್ಷಗಾನ ಬಯಲಾಟ
ಏ.೪, ಶನಿವಾರ : ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ, ಆಂಜನೇಯೋತ್ಸವ ಮಹಾಮಂಗಲ
ಉಳಿದಂತೆ ಪ್ರತಿದಿನ ಶ್ರೀ ಸ್ವಾಮೀಜಿಯವರ ’ಆಂಜನೇಯ ತತ್ತ್ವಾರ್ಥ ಪ್ರವಚನ’ವಿರುತ್ತದೆ.